ಸೂರ್ಯಕಾಂತಿ ಚಿತ್ರದ ಮೂಲಕ ಮತ್ತೊಂದು ತಮಿಳು ಪ್ರತಿಭೆ ಕನ್ನಡಕ್ಕೆ ಬಂದಿದೆ. ಅದು ಚಿತ್ರದ ನಾಯಕಿ ರೆಜಿನಾ. ಕನ್ನಡದಲ್ಲಿ ಇದು ಈಕೆಯ ಮೊದಲ ಚಿತ್ರ. ತಮಿಳಿನಲ್ಲಿ ಈಗಾಗಲೇ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಂದು ಕಂಡನಾಲ್ ಮುದಲ್, ಮತ್ತೊಂದು ಅಳಗಿಯ ಅಸುರ.
ಈಕೆ ತನ್ನ ಒಂಬತ್ತನೇ ವಯಸ್ಸಿನಲ್ಲಿ ತಮಿಳು ಚಿತ್ರವೊಂದರಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಐದು ವರ್ಷಗಳ ಕಾಲ ಟಿವಿ ಚಾನೆಲ್ ನಿರೂಪಕಿಯಾಗಿದ್ದರು. ನೂರಾರು ಜಾಹಿರಾತುಗಳಲ್ಲಿ ರೂಪದರ್ಶಿಯಾಗಿಯೂ ಕಾಣಿಸಿಕೊಂಡ ಅನುಭವ ಈಕೆಯ ಬೆನ್ನಿಗಿದೆ.
ಪ್ರಸ್ತುತ ಅವರು ಪದವಿ ಮೊದಲ ವರ್ಷದ ವಿದ್ಯಾರ್ಥಿನಿ. ಸೈಕಾಲಜಿ ಕಲಿಯಬೇಕೆಂಬುದು ಈಕೆಯ ಕನಸು. ಮನುಷ್ಯನ ಚಟುವಟಿಕೆಗಳನ್ನು ಅರಿಯಲು ಮನಶಾಸ್ತ್ತ್ರ ಮುಖ್ಯವಾಗುತ್ತದೆ ಎನ್ನುತ್ತಾರೆ ರೆಜಿನಾ. ಸಿನಿಮಾಕ್ಕಿಂತ ಇವರಿಗೆ ಓದು ಹೆಚ್ಚು ಮುಖ್ಯವಂತೆ. ಅದಕ್ಕಾಗಿ ಪರೀಕ್ಷೆ ಸಮಯದಲ್ಲಿ ಶೂಟಿಂಗ್‌ಗೆ ರಜೆ ಹಾಕುತ್ತಾರಂತೆ
ಆಕರ್ಷಕ ನಗು, ಕೋಲು ಮುಖದ ಚೆಲುವೆ ರೆಜಿನಾ. ಚೆನ್ನೈ ಮೂಲದ ಲವಲವಿಕೆಯ ವ್ಯಕ್ತಿತ್ವದ ಈ ನಟಿ ಪಟಪಟನೆ ತಮ್ಮ ಆಸೆ- ಅನಿಸಿಕೆಗಳನ್ನು ಹಂಚಿಕೊಂಡರು. ಚಿಕ್ಕಂದಿನಿಂದಲೂ ಜಾಹೀರಾತು ಚಿತ್ರಗಳಲ್ಲಿ ನಟಿಸುತ್ತಿದ್ದ ಇವರಿಗೆ ಸಿನಿಮಾಗಳಲ್ಲಿ ನಟಿಸುವುದು ಬಹುದಿನದ ಆಸೆ. ಮಕ್ಕಳ ಕಾರ್ಯಕ್ರಮಗಳ ನಿರೂಪಕಿಯಾಗಿ ಕೆಲಸ ಮಾಡಿದ್ದರಿಂದ ಕ್ಯಾಮೆರಾ ಕಂಡರೆ ಭಯವೇನೂ ಇಲ್ಲ.
9ನೇ ತರಗತಿಯಲ್ಲಿ ಓದುವಾಗ ‘ಕಂಡನಾಲ್ ಮುದಲ್’ ತಮಿಳು ಚಿತ್ರದಲ್ಲಿ ನಟಿಸಿ, ಎರಡು ವರ್ಷದ ನಂತರ ‘ಅಳಗೈ ಅಸುರ’ ಚಿತ್ರಕ್ಕೆ ಬಣ್ಣ ಹಚ್ಚಿದರು. ಆ ಚಿತ್ರ ತೆರೆ ಕಂಡ ಮೂರು ವರ್ಷಗಳ ನಂತರ ಇದೀಗ ‘ಸೂರ್ಯಕಾಂತಿ’ ಕನ್ನಡ ಚಿತ್ರಕ್ಕಾಗಿ ಇಲ್ಲಿಗೆ ಬಂದಿದ್ದಾರೆ. ಕನ್ನಡದಲ್ಲಿ ಮಾತನಾಡುವ ಆಸಕ್ತಿಯೂ ಇದೆ. ಈ ಸಿನಿಮಾದಿಂದ ತುಂಬಾ ಕಲಿತಿದ್ದಾರಂತೆ.
‘ಮನಶಾಸ್ತ್ರ ಎಲ್ಲರೂ ಓದಬೇಕಾದ ವಿಷಯ. ಜನರ ನಡವಳಿಕೆಯನ್ನು ಮತ್ತು ಮುಖ ಓದುವಿಕೆಯನ್ನು ಕಲಿಯುವ ಅಗತ್ಯ ಎಲ್ಲರಿಗೂ ಇದೆ’ ಎನ್ನುವ ರೆಜಿನಾ ಮನೋ ವಿಜ್ಞಾನದ ವಿದ್ಯಾರ್ಥಿನಿ. ಎಂತಹ ಪಾತ್ರಗಳ ನಿರೀಕ್ಷೆ ಇದೆ ಎಂದರೆ, ‘ನಾನು ಯಾವ ಪಾತ್ರಕ್ಕೆ ಸೂಕ್ತ ಎಂಬುದನ್ನು ತಿಳಿದುಕೊಳ್ಳಬೇಕಿದೆ. ಇನ್ನೂ ತುಂಬಾ ಸಮಯ ಇರುವುದರಿಂದ ನಿಧಾನವಾಗಿ ಯೋಚಿಸಿ ನಿರ್ಧಾರ ಹೆಜ್ಜೆ ಇಡುವೆ’ ಎನ್ನುವ ಬುದ್ಧಿವಂತಿಕೆ ರೆಜಿನಾಗಿದೆ.
‘ನಾನು ತುಂಬಾ ತುಂಟ ಹುಡುಗಿ, ಕೆಲವೊಮ್ಮೆ ಟಾಮ್‌ಬಾಯ್ ವ್ಯಕ್ತಿತ್ವದವಳು. ಅಮ್ಮ ತುಂಬಾ ಶಿಸ್ತಿನಿಂದ ಬೆಳೆಸಿದ್ದಾರೆ. ನನ್ನನ್ನು ನಾನು ಅರ್ಥಮಾಡಿಕೊಳ್ಳಲು ಅಮ್ಮ ನೆರವಾಗಿದ್ದಾರೆ. ನನ್ನ ತಪ್ಪುಗಳನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತಾರೆ’ ಎಂದು ನಗುವ ರೆಜಿನಾಗೆ, ‘ಭಿನ್ನ ಭಾಷೆ, ಭಿನ್ನ ಜನ, ಭಿನ್ನ ಜಾಗಗಳಲ್ಲಿ ಕೆಲಸ ಮಾಡುವುದು ಒಂದು ಸವಾಲಂತೆ’.
ಸಂತೋಷವಾಗಿಯೇ ಓದು ಮತ್ತು ವೃತ್ತಿಯನ್ನು ತೂಗಿಸಿಕೊಂಡು ಹೋಗುತ್ತಿರುವ ಆಕೆಯ ಮೆಚ್ಚಿನ ಹವ್ಯಾಸ ಎಂದರೆ ಬಾತ್‌ರೂಂ ಡಾನ್ಸಿಂಗ್ ಅಂತೆ.